ಪತ್ರ ಸಾಹಿತ್ಯ -
ಕಾವ್ಯ ನಾಟಕ ಪ್ರಬಂಧಗಳಂತೆ ಪತ್ರ ಸಾಹಿತ್ಯವೂ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಒಂದು. ಅಷ್ಟೇ ಮುಖ್ಯವಾದುದೂ ಹೌದು. ಸಾಹಿತ್ಯ ಎಂಬ ಪದವನ್ನು ಅದರ ಸ್ಥೂಲ ಹಾಗೂ ವ್ಯಾಪಕ ಅರ್ಥದಲ್ಲಿ ಬಳಸಿದಾಗ ವ್ಯಾವಹಾರಿಕ ಪತ್ರಗಲೂ ಪತ್ರ ಸಾಹಿತ್ಯದಲ್ಲಿ ಸೇರುತ್ತವೆ. ಆದರೆ ಇಲ್ಲಿ ನಿಜ ಸಾಹಿತ್ಯದ ಸೊಗಡನ್ನುಳ್ಳ ಪತ್ರಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗಿದೆ. 

	ಪ್ರಾರಂಭದ ದಿನಗಳಲ್ಲಿ ಅಂದರೆ ಭಾಷೆಯನ್ನು ಮನುಷ್ಯ ಸಂವಹನ ಕಾರ್ಯಕ್ಕಾಗಿ ಬಳಸಿಕೊಂಡಾಗಲೇ ಪತ್ರಗಳ ಉಗಮವಾಯಿತು ಎಂದು ನಾವು ಸ್ಥೂಲವಾಗಿ ಗ್ರಹಿಸಬಹುದು. ಸಂವಹನ ಕ್ರಿಯೆ ವಿಸ್ಥಾರವಾದಂತೆಲ್ಲ ಭಾಷಾ ಬಳಕೆ ಆ ಮೂಲಕ ಪತ್ರಗಳ ಬಳಕೆಯೂ ವಿಸ್ತಾರವಾಗುತ್ತ ಬಂದವು. ಅಷ್ಟೇ ಅಲ್ಲದೆ ಸಾಮಾನ್ಯವಾಗಿ ಎಲ್ಲ ಜನರ ದಿನನಿತ್ಯದ ಬದುಕಿನಲ್ಲಿ ಪತ್ರದ ಸ್ಥಾನವಿರುವುದರಿಂದ ಇದಕ್ಕೆ ಉಳಿದೆಲ್ಲ ಸಾಹಿತ್ಯ ಪ್ರಕಾರಗಳಿಗಿಂತ ಪ್ರಾಮುಖ್ಯ ಹೆಚ್ಚಿತು.

	ಪತ್ರಸಾಹಿತ್ಯದ ಲಿಖಿತ ದಾಖಲೆಗಳು ಸ್ಪಷ್ಟವಾಗಿ ಮೊದಮೊದಲು ಕಂಡು ಬರುವುದು ಪಾಶ್ಚಾತ್ಯ ಭಾಷೆಗಳಲ್ಲೇ. ಪ್ರಾಚೀನ ಈಜಿಪ್ಷನ್ ಮತ್ತು ಯೆಹೂದಿ ಭಾಷೆಗಳಲ್ಲಿ ಇದರ ಸ್ವರೂಪವನ್ನು ಕಾಣಬಹುದೆಂದು ಹೇಳಲಾಗಿದೆ. ಲ್ಯಾಟಿನ್ ಕವಿ ಹಾರಿಸ್ (ಕ್ರಿ.ಪೂ. 65-8) ಪತ್ರ ಸ್ವರೂಪದ 20 ಕವನಗಳನ್ನು ಬರೆದಿದ್ದಾನೆ. ಅವುಗಳಲ್ಲಿ ಕೆಲವು ಸ್ಪಷ್ಟವಾಗಿ ಪತ್ರಗಳೇ ಆಗಿವೆ. ಅವುಗಳಲ್ಲಿನ ವಸ್ತು ವ್ಯಕ್ತಿಯ ನಡತೆ ಮತ್ತು ಸಾಹಿತ್ಯ ಚಿಂತನೆ ಕುರಿತಾದದ್ದು. ಲಂಡನ್ನಿನ ಮುದ್ರಣಗಾರ ಮತ್ತು ಪತ್ರ ಲೇಖಕನಾದ ಸ್ಯಾಮುಯಲ್ ರಿಚರ್ಡಸನ್ನನನ್ನು (1689-1761) ಕೆಲವು ಮಾದರಿಪತ್ರಗಳನ್ನು ಬರೆದುಕೊಡಲು ಕೇಳಿಕೊಂಡಾಗ ಆತ ಧಾರಾವಾಹಿಯಾಗಿ ಪತ್ರಗಳನ್ನು ಬರೆಯುವುದರ ಮೂಲಕ ಮೊದಲ ಇಂಗ್ಲಿಷ್ ಕಾದಂಬರಿ ಪಮೇಲ (1740) ಎಂಬುದನ್ನು ರಚಿಸಿದ. ಇದೇ ರೀತಿ ಕನ್ನಡದಲ್ಲಿ ಬೀಚಿ 25 ಪತ್ರಗಳ ಮೂಲಕ ಬೆಳ್ಳಿಪತ್ರಗಳು (1965) ಎಂಬ ಕಾದಂಬರಿ ಬರೆದಿದ್ದಾರೆ. ಹೀಗೆಯೇ ಭಾರತೀಯ ಸಾಹಿತ್ಯದಲ್ಲೂ ಕೆಲವು ನಿದರ್ಶನಗಳು ಸಿಗುತ್ತವೆ. ಸಂಸ್ಕøತ ಮಹಾಕವಿ ಕಾಳಿದಾಸನ ಮೇಘದೂತ ಪತ್ರರೂಪದ ಕಾವ್ಯವಾಗಿದೆ.

	ಕನ್ನಡದ ಮೊದಲ ಗದ್ಯಗ್ರಂಥವಾದ ವಡ್ಡಾರಾಧನೆಯಲ್ಲಿ ಓಲೆ ಎಂಬ ಪದವನ್ನು ಪತ್ರ ಎಂಬ ಅರ್ಥದಲ್ಲಿ ಬಳಸಲಾಗಿದೆ. ಕ್ರಿ. ಶ. 15ನೆಯ ಶತಮಾನದ ಹೊತ್ತಿಗೆಲ್ಲ ಕಾಗದ ಎಂಬುದು ಪತ್ರಕ್ಕೆ ಪರ್ಯಾಯವಾಗಿ ಬಳಕೆಯಾಗಿರುವುದನ್ನು ಪುರಂದರ ದಾಸರ ಕಾಗದ ಬಂದಿದೆ ಎಂಬ ಕೀರ್ತನೆಯಲ್ಲಿ ಗುರುತಿಸಬಹುದು.

	ವೈಯಕ್ತಿಕ ಪತ್ರಗಳು : ದಿನನಿತ್ಯದ ಬದುಕಿನಲ್ಲಿ ನಾವು ನಾನಾ ಬಗೆಯ ಪತ್ರ ವ್ಯವಹಾರವನ್ನು ಮಾಡುತ್ತಿರುತ್ತೇವೆ. ಮತ್ತೊಬ್ಬರ ಕ್ಷೇಮಸಮಾಚಾರ ತಿಳಿದು ಕೊಳ್ಳವುದಕ್ಕೆ, ಮಾನವೀಯ ಸಂಬಂಧಗಳನ್ನು ಕುದುರಿಸಿಕೊಳ್ಳವುದಕ್ಕೆ ಅಥವಾ ವಿಷಯ ಸಂಗ್ರಹಣೆಗಾಗಿ ಪತ್ರಗಳನ್ನು ಒಬ್ಬರಿಗೊಬ್ಬರು ಬರೆಯುತ್ತೇವೆ. ಇಂಥ ಪತ್ರಗಳಲ್ಲಿ ದಿನನಿತ್ಯದ ಆಗುಹೋಗಿನ ಸಂಗತಿಗಳಿರಬಹುದು ಅಥವಾ ವೈಯಕ್ತಿಕ ಸಂಗತಿಗಳಿರಬಹುದು. ಸಾಮಾನ್ಯವಾಗಿ ಈ ಮಾದರಿಯ ಪತ್ರಗಳಲ್ಲಿ ಆತ್ಮೀಯತೆ ಎದ್ದು ಕಾಣುವ ಲಕ್ಷಣವಾಗಿರುತ್ತದೆ. ವೈಯಕ್ತಿಕ ಪತ್ರಗಳ ಮೂಲಕ ಪ್ರಸಿದ್ಧ ವ್ಯಕ್ತಿಯೊಬ್ಬನ ಜೀವನ ಸೋಲುಗೆಲುವುಗಳನ್ನು, ಆ ಮೂಲಕ ಆಯಾ ಸಮಾಜಕ್ಕೆ ಅಥವಾ ದೇಶಕ್ಕೆ ಆತನ ಕೊಡುಗೆಗಳ ಇತಿಮಿತಿಗಳನ್ನು ಅರಿತುಕೊಳ್ಳಬಹುದು. ಈ ವೈಯಕ್ತಿಕ ಅಥವಾ ಸ್ನೇಹಪತ್ರಗಳ ಅನೇಕ ಸಂಕಲಗಳನ್ನು ನಾವು ಕನ್ನಡದಲ್ಲಿ ಮತ್ತು ಇತರ ಭಾಷೆಗಳಲ್ಲಿ ಕಾಣಬಹುದಾಗಿದೆ.

	ಕ್ರಿ. ಶ. 1823ರಲ್ಲಿ ಪ್ರಕಟವಾದ ಅತ್ಯಂತ ಪ್ರಸಿದ್ಧವಾದ ಪಾಸ್ಟನ್ ಪತ್ರಗಳು ಈ ಗುಂಪಿಗೆ ಸೇರಿದವುಗಳಾಗಿವೆ. ಕ್ರಿ. ಶ. 1422 ರಿಂದ 1509ರವರೆಗೆ ಪಾಸ್ಟನ್ ಕುಟುಂಬದ ಸದಸ್ಯರೊಳಗೇ ನಡೆದ ಪತ್ರವ್ಯವಹಾರದ ಕಟ್ಟು, ಈ ಪುಸ್ತಕ. ಐತಿಹಾಸಿಕ ದೃಷ್ಟಿಯಿಂದ ಈ ಪುಸ್ತಕಕ್ಕೆ ಬೆಲೆಯಿದೆಯೇ ಹೊರತು ಬೇರಾವ ಕಾರಣದಿಂದಲೂ ಅಲ್ಲ. ಲಂಟನ್ ಜೈಲಿನಲ್ಲಿದ್ದಾಗ (ಕ್ರಿ.ಶ. 1643-1651) ರಾಜ ಮನೆತನಕ್ಕೆ ಸೇರಿದ ಜೇಮ್ಸ್ ಹಾವೆಲ್ಲ ಎಂಬಾತ ಕಾಲ್ಪನಿಕ ವ್ಯಕ್ತಿಯೊಬ್ಬನನ್ನು ಕುರಿತು ಜೈಲಿನಿಂದಲೇ ಬರೆದ ಪತ್ರಗಳು-ಇಂಗ್ಲಿಷ್ ಭಾಷೆಯಲ್ಲಿ ಬಂದ ಮೊಟ್ಟಮೊದಲ ಕಾಲ್ಪನಿಕ ಪತ್ರಗಳು. ಪತ್ರಗಳು ಕಾಲ್ಪನಿಕವಾದರೂ ವೈಯಕ್ತಿಕವಾಗುವುದರಿಂದ ಈ ವಿಭಾಗಕ್ಕೆ ಸೇರುತ್ತವೆ.

	ಲಾರ್ಡ್ ಚೆಸ್ಟರ್ ಫೀಲ್ಡ್ ಲೆಟರ್ಸ್ ಟು ಹಿಸ ಸನ್ ಎಂಬುದು ಮತ್ತೊಂದು ಪ್ರಮುಖ ಇಂಗ್ಲಿಷ್ ಪತ್ರ ಸಂಕಲನ. ಇಲ್ಲಿ ಒಬ್ಬ ತಂದೆ ತನ್ನ ಮಗನಿಗೆ ಬದುಕಿನ ಅನೇಕ ಸಂಗತಿಗಳನ್ನು ಕುರಿತು ಸರಳವಾದ ಭಾಷೆಯಲ್ಲಿ ಆಕರ್ಷಕವಾಗಿ ಬರೆದಿರುವುದು ಕಾಣುತ್ತದೆ. ಪತ್ರಗಳಲ್ಲಿ ತಂದೆ ತನ್ನ ಮಗನಿಗೆ ಬದುಕಿನಲ್ಲಿ ಶಿಸ್ತು, ಆನಂದ, ಸ್ನೇಹ, ಕಾಲದ ಮಹಿಮೆ, ವಿಶ್ವಾಸ ಮುಂತಾದವುಗಳ ಮಹತ್ತ್ವವನ್ನು ಕುರಿತು ಬರೆದಿದ್ದಾನೆ. ಬಹುಪಾಲು ನೀತಿ ಬೋಧಕಗಳಾಗಿವೆ ಈ ಪತ್ರಗಳು.

	ಜಾನ್ ಕೀಟ್ಸ್ ಕವಿಯ ಪತ್ರಗಳು ದೊರೆಯದಿದ್ದಲ್ಲಿ ಅವನ ವ್ಯಕ್ತಿತ್ವದ ಅನೇಕ ಸಂಗತಿಗಳು ನಮಗೆ ಗೊತ್ತಾಗುತ್ತಿರಲಿಲ್ಲ. ಕೌಪರನ ಸರಳಜೀವನ, ಮುಗ್ಧ ಸ್ವಭಾವ, ನಿರಾಡಂಬರ ರೀತಿ, ಗ್ರೇ ಕವಿಯ ಅಭ್ಯಾಸಪೂರ್ಣ ನೋಟ, ಪೋಪ್ ಕವಿಯ ಕೃತ್ರಿಮತೆ, ಲೇಡಿ ಮಾಂಟೆಗ್ಯೂಳ ವ್ಯಕ್ತಿತ್ವದ ಸೂಕ್ಷ್ಮ ನಿರೂಪಣೆ, ಸ್ಟಿಫ್ಟನ ಹೃದಯ ವಿದ್ರಾವಕ ಜೀವನ, ಬೈರನ್ನನ ಸ್ವಚ್ಛಂದ ಮನೋವೃತ್ತಿ-ಹೀಗೆ ಹತ್ತು ಹಲವು ಪ್ರಮುಖರ ಜೀವನವಿಧಾನವನ್ನು ಅವರವರ ಪತ್ರಗಳಲ್ಲಿ ಕಾಣಬಹುದಾಗಿದೆ.

	ಕನ್ನಡದಲ್ಲೂ ಈ ಮಾದರಿಯ ಕೆಲವು ಪತ್ರಸಂಕಲನಗಳು ಬಂದಿವೆ. 1947ರಲ್ಲಿ ಉರ್ದು ಮೂಲದಿಂದ (ಲೇ : ಕಾಜಿ ಅಬ್ದುಲ್ ಗಫಾರ್) ಕನ್ನಡಕ್ಕೆ ಅನುವಾದವಾಗಿ ಬಂದ (ಅನು : ಲಿಂಗಸುಗೂರು ವಿಠ್ಠಲರಾಯರು) ಲೈಲಾ ಪತ್ರಗಳು ಪ್ರಣಯ ಸಂಬಂಧವಾದವು. ಈ ಪತ್ರಗಳು ಮುಸ್ಲಿಂ ಧಾರ್ಮಿಕ ನಿಯಮಗಳನ್ನೇ ಮೂಲಭೂತವಾಗಿ ಪ್ರಶ್ನಿಸುತ್ತವೆ. 1950ರಲ್ಲಿ ಬಂದ ನಾಡಿಗ ಕೃಷ್ಣಮೂರ್ತಿಯವರು ನಮ್ಮ ಕಾಗದಗಳು ಎಂಬ ಸಂಕಲನದಲ್ಲಿ ನಮಗೆ ಅಮೆರಿಕದ ಜನ, ಅವರ ಸಂಸ್ಕøತಿ, ಲಂಡನ್ನಿನ ಜನಜೀವನ ಮುಂತಾದವುಗಳ ಪರಿಚಯವಾಗುತ್ತದೆ. 1950ರಲ್ಲಿ ಕನ್ನಡದಲ್ಲಿ ಬಂದ ವಿವೇಕಾನಂದರ ಪತ್ರಮಾಲೆಯಲ್ಲಿ ಧಾರ್ಮಿಕ ಮತ್ತು ಸಾಂಸ್ಕøತಿಕ ವಿಷಯಗಳಿಗೆ ಸಂಬಂಧಿಸಿದ ಅನೇಕ ಸಂಗತಿಗಳಿವೆ. ಪ್ರಪಂಚದಲ್ಲಿ ಪ್ರೀತಿಸಲು ಯೋಗ್ಯವಾದುದು ಒಂದೇ ವಸ್ತು. ಅದೇ ಭಗವಂತ (ಪತ್ರ 10) ಎಂಬಲ್ಲಿ ವಿವೇಕಾನಂದ್ ದೈವಪ್ರಜ್ಞೆಯನ್ನೂ ಶ್ರೀಮಂತರು ಎನಿಸಿಕೊಳ್ಳುವವರನ್ನೂ ಎಂದಿಗೂ ನೆಚ್ಚಬೇಡಿ, ಬದುಕುವುದಕ್ಕಿಂತ ಹೆಚ್ಚಾಗಿ ಅವರು ಸತ್ತಿದ್ದಾರೆ (ಪತ್ರ 14) ಎಂಬಲ್ಲಿ ಶ್ರೀಮಂತರ ಸತ್ತಬದುಕನ್ನೂ ಜಾತಿ ಎಂಬುದು ಸಮಾಜದಲ್ಲಿ ಒಂದು ಆಂತರಿಕ ವಿಭಾಗವಾಗಿ ಅದರ ದುರ್ಗಂಧದಿಂದ ಭಾರತದ ವಾತಾವರಣವೆಲ್ಲ ತುಂಬಿದೆ. ಜನ ಕಳೆದುಕೊಂಡ ಸಾಮಾಜಿಕ ವ್ಯಕ್ತಿತ್ವವನ್ನು ಅವರಿಗೆ ಮರಳಿ ಕೊಡುವುದರಿಂದ ಈ ಪಿಡುಗು ತಾನೆ ಮಾಯವಾಗುವುದು (ಪತ್ರ 15)-ಎಂಬಲ್ಲಿ ವಿವೇಕಾನಂದರ ಜೀವನದೃಷ್ಟಿಯನ್ನೂ ಗುರುತಿಸಬಹುದಾಗಿದೆ.

	ಕೆನಡದಲ್ಲಿ ಕನ್ನಡಿಗ- ಡಾ. ವಿ. ಶೆಟ್ಟಿಯವರ ಈ ಪುಸ್ತಕ ನಮಗೆ ಕೆನಡ ದೇಶದ ಜನಜೀವನದ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಒದಗಿಸುವ ಒಂದು ಉತ್ತಮ ಪತ್ರಸಂಕಲನ. ಪಯಣದಹಾದಿಯಿಂದ- ಎಚ್.ವಿ. ಚಂದ್ರಶೇಖರ್ ಅವರು ತಮ್ಮ ತಂಗಿಗೆ ಬರೆದಿರುವ ಪುಸ್ತಕ. ಪ್ರವಾಸ ಮಾಡಿದಾಗ ತಂಗಿಗೆ ಬರೆದ ಪತ್ರಗಳು ರನ್ನಿಂಗ್ ಕಾಮೆಂಟರಿ ಇದ್ದ ಹಾಗೆ ಎಂಬ ಅವರ ಮಾತು ಅರ್ಥಪೂರ್ಣವಾದುದು. ಸಾಹಿತ್ಯ ಲಾಲನೆ (1967) ಮಾಸ್ತಿ ವೆಂಕಟೇಶ ಅಯ್ಯಂಗಾರರಿಂದ ಸಂಪಾದಿತವಾದ ಪತ್ರ ಸಂಕಲನ. ಸಂಕಲನದ ಬಹುಭಾಗ ಇಂಗ್ಲಿಷ್ ಪತ್ರಗಳಿಂದ ತುಂಬಿದೆ. ಮಾಸ್ತಿಯವರು ಬರೆದ ಮತ್ತು ಅವರಿಗೆ ಬೇರೆಯವರು ಬರೆದ ಪತ್ರಗಳಲ್ಲಿ ಕೆಲವು ಕಡೆ ಅವರ ಕೃತಿಗಳ ವಿಮರ್ಶೆ ನಡೆದಿರುವುದೂ ಉಂಟು.

	ಡಿ.ವಿ.ಜಿ. ಅವರ ಚೆನ್ನಬಸವನಾಯಕ ಎಂಬ ಪುಸ್ತಕದಲ್ಲಿ ಪರೋಕ್ಷವಾಗಿ ಮಾಸ್ತಿಯವರ ಚೆನ್ನಬಸವನಾಯಕ ಕೃತಿಯ ಮೌಲ್ಯ ನಿಷ್ಕರ್ಷಣೆಯ ಪ್ರಯತ್ನ ನಡೆದಿರುವುದು ಕಾಣುತ್ತದೆ. ಮೋಪಸಾನ ಓಲೆಗಳು (ಅನು : ಪಿ. ವೆಂಕೋಬಾಚಾರ್ಯ) ಫ್ರೆಂಚ್ ಸಾಹಿತಿ ಮೋಪಸಾನನ ಜೀವನದ ಕಷ್ಟ ಸುಖಗಳಿಗೆ ಹಿಡಿದ ಕನ್ನಡಿಯಂತಿವೆ.

	ದಕ್ಷಿಣೇಶ್ವರ ದರ್ಶನ (1962) ಪತ್ರ ಸಂಕಲನವನ್ನು ಪ್ರಕಟಿಸಿದಕ ಕೋ. ಚೆನ್ನಬಸಪ್ಪ ಅವರು ಪುಸ್ತಕ ಮುನ್ನಡಿಯಲ್ಲಿ ಪತ್ರ ಬರೆಯುವವನಿಗೆ ವಿಷಯದ ಪರಿಮಿತಿ ಯಾವುದೂ ಇಲ್ಲ, ಅವನ ಕಲ್ಪನಾ ಸಾಮಥ್ರ್ಯಕ್ಕೆ ಸ್ವಚ್ಛಂದ ಸಾಮಥ್ರ್ಯವಿದೆ ಎಂದು ತಿಳಿಸುತ್ತಾರೆ. ಈ ದೇಶದ ಜಾತಿಪದ್ಧತಿ ಹೋಗಲು ಅವರು ಅಲ್ಲಿ ಕೊಡುವ ಪರಿಹಾರ ಗಮನಾರ್ಹವಾದುದು. ನವರತ್ನರಾಮ್ ಅವರ ಪ್ಯಾರಿಸ್ಸಿನಿಂದ ಪ್ರೇಯಸಿಗೆ (1966) ಎಂಬುದು ಒಂದು ಉತ್ತಮ ಪತ್ರಸಂಕಲನ. ಪುಸ್ತಕದುದ್ದಕ್ಕೂ ಬರುವ ಪ್ಯಾರಿಸ್ ನಗರದ ವರ್ಣನೆ, ಅಲ್ಲಿಯ ವೇಶ್ಯಾಜೀವನ, ಹೋಟೆಲುಗಳ ವರ್ಣನೆ, ಭಾಷಾ ಗೊಂದಲ ಮುಂತಾದವನ್ನು ಸರಳವಾಗಿ, ಮನಮೋಹಕವಾಗಿ ಲೇಖಕರು ಹೇಳಿಕೊಂಡು ಹೋಗಿದ್ದಾರೆ. ಹರಿಹರಪ್ರಿಯರು ಸಂಪಾದಿಸಿದ ಕುವೆಂಪು ಪತ್ರಗಳು (1974) ಕುವೆಂಪು ಅವರು ಬೇರ ಬೇರೆಯವರಿಗೆ ಬರೆದ ಪತ್ರಗಳ ಸಂಕಲನ. ಬೇಜಗೌ ಅವರ ಕುಲಪತಿಯ ಪತ್ರಗಳು (1975)-ಅವರ ಕನ್ನಡದ ಅಭಿಮಾನವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಸಿಂಪಿ ಲಿಂಗಣ್ಣ ಸಂಪಾದಿತ ಶ್ರೀ ಅರವಿಂದರ ಪತ್ರಗಳು ಅಧ್ಯಾತ್ಮ ಸಂಗತಿಗಳನ್ನು ತಿಳಿಸುತ್ತವೆ. ಜವಾಹರಲಾಲ್ ಅವರ ಪತ್ರಗುಚ್ಛ (1975) ಅವರ ವಿಭಿನ್ನ ಮುಖಗಳನ್ನು ಪರಿಚಯ ಮಾಡಿಕೊಡುತ್ತದೆ.

	ವೈಯಕ್ತಿಕ ಪತ್ರಗಳಲ್ಲಿ ಯಾವುದನ್ನು ಪ್ರಕಟಿಸಬೇಕು ಯಾವುದನ್ನು ಪ್ರಕಟಿಸಬಾರದು ಎಂಬ ಪರಿವೆ ಇರಬೇಕಾಗುತ್ತದೆ. ಇಲ್ಲದಿದ್ದರೆ ಪತ್ರಗಳ ಉದ್ದೇಶ ಸಾಧನೆಯಾಗದೇ ಹೋಗುವ ಸಾಧ್ಯತೆಗಳೂ ಇರುತ್ತವೆ. ಮಾಸ್ತಿಯವರ ಪತ್ರಗಳು (1977) ಯಾವ ಮಹತ್ವ್ತವಾದ ಘಟನೆಯನ್ನೂ ಹೊಂದಿಲ್ಲವಾದ್ದರಿಂದ ಅದರ ಪ್ರಕಟಣೆಯ ಉದ್ದೇಶ ಸ್ಪಷ್ಟವಾಗುವುದಿಲ್ಲ. ಇದೇ ರೀತಿ ದತ್ತಾತ್ರೇಯ ಮಂಜುನಾಥ ಬುರುಡೆ ಅವರ ಪತ್ರಸಂಕಲನದಲ್ಲಿ ಜೀವನ ಪ್ರವಾಹದಲ್ಲಿ ಬುರುಡೆ ಅವರ ಬಾಲ್ಯವಿದ್ಯಾರ್ಥಿಜೀವನ, ನೌಕರಿಗಾಗಿ ಅಲೆದಾಡಿದ್ದು ಇತ್ಯಾದಿಗಳ ವಿವರ ಸಿಗುತ್ತವೆ. ಈ ಪತ್ರಗಳಲ್ಲಿ ಸಾಹಿತ್ಯಿಕ ಅಥವಾ ಸಾಮಾಜಿಕವಾದ ಯಾವುದೇ ಮಹತ್ತರವಾದ ಘಟನೆಗಳ ಪ್ರಸ್ತಾಪವೂ ಇಲ್ಲ.

	ಸಾಹಿತ್ಯಿಕ ಪತ್ರಗಳು : ಸಾಹಿತ್ಯ ಪ್ರಕಾರಗಳಲ್ಲಿ ಹರಟೆಯ ಶೈಲಿ ಬಹು ಜನಪ್ರಿಯವಾದುದು. ಬಹುಶಃ ಅದಕ್ಕಿಂತ ಆಕರ್ಷಕವಾದುದು ಮತ್ತು ಅದಕ್ಕಿಂತಲೂ ಹೆಚ್ಚು ಜನಪ್ರಿಯವಾದುದು ಸಾಹಿತ್ಯಿಕ ಪತ್ರಗಳು. ಹರಟೆಯ ಶೈಲಿ ಒಳ್ಳೆಯ ಸ್ನೇಹ ಪತ್ರದ ಲಕ್ಷಣ, ಅದು ಒಂದು ಘನವಿಚಾರದ ಅಂತರಂಗವನ್ನು ಒಂದು ಲಘು ಟೀಕೆಯಿಂದ ಹೊರಪಡಿಸುವ ಸೊಗಸು (ನಮ್ಮ ಕಾಗದಗಳು-ಮುನ್ನುಡಿ) ಎಂಬ ಡಿವಿಜಿ ಅವರ ಮಾತು ಸಾಹಿತ್ಯಿಕ ಪತ್ರಗಳಿಗೆ ಹೆಚ್ಚು ಅನ್ವಯಿಸುತ್ತದೆ.

	ಆಧುನಿಕ ಇಂಗ್ಲಿಷ್ ಕಾದಂಬರಿ ಸ್ಯಾಮ್ಯುಯಲ್ ರಿಚರ್ಡಸನ್ನನ ಪಮೇಲ ಪತ್ರರೂಪದಲ್ಲಿ ಬಂದ ಮೊದಲ ಕಾದಂಬರಿ ಅದೇರೀತಿ ಒಬಿಯಾಸ್ ಸ್ಮಾಲೆಟ್ ಹಂಫ್ರಿಕ್ಲಿಂಕರ್(1771) ಮತ್ತು ಫ್ಯಾನಿ ಬರ್ನಿ ಎವ್‍ಲಿನ್ (1778) ಪತ್ರರೂಪದ ಕಾದಂಬರಿಗಳನ್ನು ಬರೆದಿದ್ದಾರೆ. ಆದರೆ ಮುಂದೆ ಅದರ ತಾಂತ್ರಿಕ ತೊಂದರೆಗಳಿಂದಾಗಿ ಈ ಪ್ರಕಾರ ಬೆಳೆಯದೇ ಹೋಯಿತು. ಚಾರಲ್ಸ್ ಲ್ಯಾಮ್‍ನ ಪತ್ರಗಳಲ್ಲಿನ ಸಹೃದಯತೆ ಮತ್ತು ಹಾಸ್ಯಮಿಶ್ರಿತ ದುಃಖವನ್ನು ಚಿತ್ರಿಸಿರುವ ಬಗೆ ಓದುಗರನ್ನು ಸೆರೆಹಿಡಿಯುತ್ತದೆ. ಆಲಿವರ್ ಗೋಲ್ಡ್ ಸ್ಮಿತ್ತನಿಂದ ಪತ್ರರೂಪದಲ್ಲಿ ಪ್ರಕಟವಾದ ದಿ ಸಿಟಿಜನ್ ಆಫ್ ದಿ ವಲ್ರ್ಡ್ ಎಂಬುದು ಇಂಗ್ಲಿಷ್ ಸಾಹಿತ್ಯದ ಒಂದು ಉತ್ತಮ ಪ್ರಬಂಧ ಸಂಕಲನ. ಇದೇ ರೀತಿ ಇಂಗ್ಲಿಷ್‍ನಲ್ಲಿ ಷೆಲ್ಲಿ, ಕಾರ್ಲೈಲ್, ಡಿಕನ್ಸ್, ರಸ್ಕಿನ್, ವಾಲ್ಟರ್ ಸ್ಕಾಟ್ ಮುಂತಾದವರ ಪತ್ರಗಳು ಸಾಹಿತ್ಯಿಕ ದೃಷ್ಟಿಯಿಂದ ಗಮನಾರ್ಹವಾಗಿವೆ.

	ಕನ್ನಡದಲ್ಲಿ ಸಾಹಿತ್ಯಕ ಪತ್ರಗಳ ಸಂಖ್ಯೆ ಗಣನೀಯವಾಗಿ ಸಿಗದಿದ್ದರೂ ಈ ಪ್ರಕಾರದಲ್ಲಿ ಕೆಲವು ಉತ್ತಮ ಕೃತಿಗಳು ಹೊರಬಂದಿವೆ. 1945ರಲ್ಲಿ ಪ್ರಕಾಶಿತಗೊಂಡ ಸಿ. ಕೃಷ್ಣ ಅವರ ಮುಗುದೆಯರ ಪತ್ರಗಳು ಈ ದಿಸೆಯಲ್ಲಿ ಒಂದು ಗಮನಾರ್ಹ ಪತ್ರಸಂಕಲನ. ಮುಖ್ಯವಾಗಿ ಇದು ಪ್ರಣಯ ಪತ್ರಗಳ ಸಂಕಲನವಾಗಿ ಕಂಡರೂ ಪ್ರೇಮವೆಂದರೆ ಗಂಡಹೆಂಡಿರಿಬ್ಬರೇ ಸಂತೋಷವಾಗಿರುವುದಲ್ಲ, ತಮ್ಮ ಸುತ್ತಮುತ್ತ ಇರುವವರಿಗೂ ಸಂತೋಷದ ಬೆಳಕನ್ನು ನೀಡುವಂಥದಾಗಿರಬೆಕು ಎಂಬ ದೇಶೋ ವಿಶಾಲವಾದ ನೀತಿಯ ತಿಳಿವು ಇಲ್ಲಿದೆ- ಎಂದು ಪುಸ್ತಕದ ಮುನ್ನುಡಿಕಾರರಾದ ಕೂಡಲಿ ಚಿದಂಬರಂ ಅವರು ಹೇಳಿರುವ ಮಾತು ಈ ಸಂಕಲನಕ್ಕೆ ಬಹುಪಾಲು ಅನ್ವಯಿಸುತ್ತದೆ. 1961ರಲ್ಲಿ ಬಂದ ವಿ.ಕೃ. ಗೋಕಾಕರ ಜೀವನ ಪಾಠಗಳು ಎಂಬ ಕೃತಿಯಲ್ಲಿ ಬಹುಪಾಲು ದೀರ್ಘಪತ್ರಗಳಿವೆ. ಪತ್ರಗಳ ವಸ್ತು ದೇವರು ಪ್ರೇಮ ಪ್ರೀತಿ ಭಕ್ತಿ ಮಾರ್ದವತೆ ಮುಂತಾದವು. ಕೊಚ್ಚಿಕೊಂಡು ಬರುವ ಕ್ರೋಧ ಎಂಥ ಅಣೆಕಟ್ಟನ್ನಾದರೂ ಕೋಡಿವರಿದು ಬರಬಲ್ಲದು (ಪತ್ರ 1) ಮಹತ್ತ್ವಾಕಾಂಕ್ಷೆ ಉರಿಯ ನಾಲಗೆಯಿದ್ದಂತೆ. ಅದಕ್ಕೆ ಇಂಧನ ದೊರೆತಲ್ಲಿ ಅದು ಚಿದಾವಕಾಶವನ್ನೇ ವ್ಯಾಪಿಸಿ ಅದನ್ನೆಲ್ಲ ಹೊಗೆಯಿಂದ ತುಂಬಿ ಬಿಡುವುದು (ಪತ್ರ 11) ಎಂಬಲ್ಲಿ ಎಚ್ಚರಿಕೆಯೂ ಮನೆ ಒಂದು ಪ್ರಯೋಗಶಾಲೆ, ವಿರಾಮಧಾಮ (ಪತ್ರ 13) ಎಂಬಲ್ಲಿ ತಿಳುವಳಿಕೆಯೂ ಓ ಗೆಳೆಯ ಚೊಕ್ಕಾಗಿ ಕಳೆದುಹೋಗು, ಇದ್ದಾಗ ಹೂವಿನಂತೆ ಗಮಗಮಿಸು. ಇಲ್ಲದಾಗ ಅದರ ಸವಿನೆನಪು ಉಳಿಯಲಿ (ಪತ್ರ 14) ಎಂಬಲ್ಲಿ ಹಿತವಚನವೂ ಇದೆ. ಬದುಕು ಬಂಗಾರ (1966) ಎಂಬುದೇ ಪಂಚಾಕ್ಷರಿ ಹಿರೇಮಠರು ಬರೆದಿರುವ ಪ್ರಣಯಪತ್ರಗಳ ಸಂಕಲನ. ಹಾಗೆಂದ ಮಾತ್ರಕ್ಕೆ ಇಡೀ ಕೃತಿ ಪ್ರಣಯದ ಕಮಟಿನಿಂದಲೇ ತುಂಬಿದೆ ಎಂದು ಅರ್ಥವಲ್ಲ. ಜೀವನ ವಿಮರ್ಶೆ ನೈತಿಕದೃಷ್ಟಿ ಸಂಕಲನದಲ್ಲಿ ಕಾಣಬರುತ್ತವೆ. ಮಂಜೇಶ್ವರದ ಎಂ. ಗೋವಿಂದ ಪೈ ಅವರ ಕೆಲವು ಪತ್ರಗಳು (ಸಂ : ಜಿ.ಪಿ. ರಾಜರತ್ನಂ 1971), ಸಂಶೋಧನ ದೃಷ್ಟಿಯಿಂದ ಕೂಡಿವೆ. ಪತ್ರಗಳ ಭಾಷೆ ಬಹುಪಾಲು ಇಂಗ್ಲಿಷ್. ತೀರ್ಥಂಕರ, ಗೊಮ್ಮಟ ಮುಂತಾದ ಪದಗಳ ನಿಷ್ಪತ್ತಿಯ ಬಗ್ಗೆ ಪತ್ರವ್ಯವಹಾರ ನಡೆಸಿರುವುದು ವ್ಯಕ್ತವಾಗುತ್ತವೆ. ಎ.ಎಸ್. ನಂಜುಂಡಸ್ವಾಮಿ ಅವರ ಗೌರವ ತಪಸ್ವಿ (1967) ಪತ್ರ ಸಂಕಲನದಲ್ಲಿ ಸಾಹಿತ್ಯ, ಕಲೆ, ಮತ್ತು ಧರ್ಮ ಇತ್ಯಾದಿಗಳನ್ನು ಕುರಿತು ಚರ್ಚಿಸಲಾಗಿದೆ. ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರ ಪತ್ರಸಂಕಲನ ಸ್ನೇಹಸೇತುವಿನ (1971) ಪತ್ರಗಳು ಮೇಲುನೋಟಕ್ಕೆ ವೈಯಕ್ತಿಕ ಪತ್ರಗಳಂತೆ ಕಂಡುಬಂದರೂ ಅನೇಕ ಪತ್ರಗಳಲ್ಲಿ ಸಾಹಿತ್ಯ, ಕಲೆ, ಜೀವನ ಮೀಮಾಂಸೆಗಳೇ ತುಂಬಿವೆ.

	ನೆಹರೂ ಅವರ ಜಗತ್‍ಪ್ರಸಿದ್ಧವಾದ ಮಗಳಿಗೆ ತಂದೆ ಓಲೆಗಳು ಗಾಂಧಿಯವರ ಪತ್ರಗಳು ಕನ್ನಡಕ್ಕೆ ಬಂದಿರುವುದು ಗಮನಿಸಬೇಕಾದ ವಿಷಯ. ಈ ಪತ್ರಗಳಲ್ಲಿ ಹಿರಿಯ ಭಾರತೀಯರಿಬ್ಬರ ಜೀವನ ದೃಷ್ಟಿ, ವಿವೇಕ ಎದ್ದು ಕಾಣುತ್ತವೆ.

	1978ರಲ್ಲಿ ಪ್ರಕಟವಾದ ಚಿತ್ರಗಳು-ಪತ್ರಗಳು ಎಂಬ ಎ.ಎನ್. ಮೂರ್ತಿರಾಯ್ ಸಂಕಲನದಲ್ಲಿ ಅವರು ತೀನಂಶ್ರೀ ಅವರಿಗೂ ತಮ್ಮ ಮಗನಿಗೂ ಸೊಸೆಗೂ ಬರೆದ ಪತ್ರಗಳಲ್ಲಿ ಕೆಲವು ಉತ್ತಮ ಸಾಹಿತ್ಯಿಕ ಮೌಲ್ಯದವಾಗಿವೆ. 

	ಈಚೆಗೆ ಪ್ರಕಟವಾದ ತುಡಿತ ಪತ್ರಗಳ ಸಂಕಲನ ದೇಜಗೌ ಅವರು ತಮ್ಮ ವಿದೇಶದಲ್ಲಿರುವ ಮಗಳಿಗೆ ಬರೆದ ಪತ್ರಗಳು. ಇವುಗಳಲ್ಲಿ ತಂದೆ ಮತ್ತು ಮಗಳ ಭಾವನಾತ್ಮಕ ಸಂಬಂಧದ ತೀವ್ರತೆಯನ್ನು ಕಾಣಬಹುದು.

	ಪತ್ರಸಂಕಲನ ವ್ಯವಸಾಯ ಕನ್ನಡದಲ್ಲಿ ಇನ್ನೂ ಸಾಕಷ್ಟು ಆಗಬೇಕಾಗಿದೆ. ಅತ್ಯುತ್ತಮ ಪತ್ರ ಸಂಕಲನಗಳು ಇನ್ನೂ ಬರಬೇಕಿವೆ. ರಾಜಕಾರಣಿ ಅಥವಾ ಅಧಿಕಾರಿಗಳ ಮಾತಂತಿರಲಿ, ಸಾಹಿತಿಗಳೂ ಕನ್ನಡದಲ್ಲಿ ಸಾಕಷ್ಟು ಪತ್ರ ಸಾಹಿತ್ಯವನ್ನು ಸೃಷ್ಟಿಸಿಲ್ಲ ಎಂಬ ದೇಜಗೌ ಅವರ ಮಾತು ಕನ್ನಡ ಪತ್ರ ಸಾಹಿತ್ಯದ ಕೊರತೆಯನ್ನು ತೋರಿಸುತ್ತದೆ.						(ಎಚ್.ಡಿ.ಒ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ